Monday, June 26, 2017

Verity 20 - L for Life, L for Lesson, L for Learning!

ತನ್ನ ಮಗನಿಗೆ ಒಂದು ವರ್ಷ ಆದ ಸುಸಂದರ್ಭದಲ್ಲಿ ಸ್ಕೂಟರ್ ಖರೀದಿಸಿದ್ದ ಟೋನಿ. ಹೋಂಡಾ ಆಕ್ಟಿವಾ. ಡಿ ಎಲ್ ಆಗಿ ತುಂಬಾ ವರ್ಷಗಳ ನಂತರ ಅದರ ಉಪಯೋಗ ಶುರುವಾಯಿತು. ಮೊದಲನೇ ದಿನ ಈ ಟ್ರಾಫಿಕ್ ಕಿರಿಕಿರಿಯಲ್ಲಿ ಹೇಗಪ್ಪಾ ಗಾಡಿ ಓಡ್ಸೋದು ಅನ್ನೋ ದಿಗಿಲಿನಿಂದಲೇ ಸ್ಕೂಟರ್ ಓಡಿಸಿದ್ದ ಟೋನಿ..

ಅದೆಲ್ಲ ಮೊದಲನೇ ದಿನದ ಓಲ್ಡ್ ಸ್ಟೋರಿ. ಅದಾಗಿ ಈಗ ಸಾವಿರ ದಿನಗಳು ಮರೆಯಾಗಿವೆ. ಟೋನಿ ಸ್ಕೂಟರ್ ಓಡ್ಸೋದು ಎಬೋವ್ ಆವರೇಜ್ ಸ್ಪೀಡಿನಲ್ಲಿ . ಟ್ರಾಫಿಕ್ ರೂಲ್ಸ್ ಗೆ ಬೆಲೆ ತೇರದೆ, ಬೆಲೆ ಕೊಡುವ ಹವ್ಯಾಸ ಬೆಳೆಸಿಕೊಂಡಿದ್ದ ಟೋನಿ ಒಬ್ಬ ಸೇಫ್ ಡ್ರೈವರ್. ಆಗಾಗ್ಗೆ ತನ್ನಷ್ಟಕ್ಕೆ ಅಂದುಕೊಳ್ಳುತ್ತಾನೆ ಟೋನಿ - ಈ ಫಿಯರ್, ದಿಗಿಲು ಅನ್ನೋದು ಒಂದು ನೆಪ ಮಾತ್ರ. ಒಮ್ಮೆ ಅದನ್ನು ಮೀರಿ ಮುಂದೆ ಹೋದರೆ ಅದು ನೆನಪು ಮಾತ್ರ. 

ಆಕ್ಟಿವಾಗೆ ಈಗ ೩ ವರ್ಷ. ಅದರ ಟೈಯರ್ ಗೂ ಅಷ್ಟೇ ವರ್ಷ. ಆಗಾಗ್ಗೆ, ಹಾಗೆ ಸುಮ್ಮನೆ ಮೊಳೆಗಳು ಹಿಂದಿನ ಟೈರಿನ ಒಳಗೆ ಹೋಗಿ ಒಳಗಿನ ಗಾಳಿಯನ್ನು ಹೊರ ಹಾಕುತ್ತಿದ್ದವು. ಹಿಂದಿನ ಟೈರನ್ನೇ ಯಾಕೆ ಆಯ್ಕೆ ಮಾಡುತ್ತಿದ್ದವು ಈ ಹಾಳಾದ ಮೊಳೆಗಳು ಎನ್ನೋದು ಟೋನಿಗೆ ಯಕ್ಷಪ್ರಶ್ನೆ. ಬಹುಷಃ ಬ್ಯಾಕ್ ಸ್ಟ್ಯಾಬ್ ಅಂತ ಇದಕ್ಕೇ ಹೇಳ್ತಾರೇನೋ?.

ಟೈರಿಗೆ ತೇಪೆ ಹಾಕ್ಸೋದು ರೂಟೀನ್ ಆದ ಮೇಲೆ, ಏಳನೇ ಬಾರಿ ಫಿಕ್ಸ್ ಮಾಡಿದಾತ ಟೋನಿಗೆ ಉಚಿತ ಸಲಹೆಯೊಂದನ್ನು ನೀಡಿದ. " ಟೈಯರ್ ಚೇಂಜ್ ಮಾಡ್ಸಿ ಸಾರ್. ಆಗ್ಲೇ ಮೂರು ವರ್ಷ ಆಗಿದೆ. ಶೋರೂಮ್ನವರು ಹಾಕಿದ ಟೈಯರ್ ಚೀಪ್ ಕ್ವಾಲಿಟಿದು, ೧೫೦೦ ರೂಗೆ ಜೆಕೆ ಟೈರ್ ಹಾಕ್ತೀನಿ".

ಓಕೆ. ನೆಕ್ಸ್ಟ್ ಟೈಮ್ ನೋಡೋಣ, ಎಂದಿದ್ದ ಟೋನಿ. 

ಹೀಗಿರುವಾಗ, ಹಾಗೆ ಮತ್ತೊಂದು ಸಾರಿ ಪಂಕ್ಚರ್ ಆದಾಗ ಆಫೀಸ್ ಹತ್ತಿರದಲ್ಲಿರುವ ಪಂಕ್ಚರ್ ಶಾಪ್ನಲ್ಲಿ ಫಿಕ್ಸ್ ಮಾಡಿಸಿಕೊಂಡ ಟೋನಿ. ಅಲ್ಲಿನವನೂ ಒಂದು ಉಚಿತ ಸಲಹೆ ನೀಡಿದ. "ಫ್ರಂಟ್ ಟೈಯರ್ ಚೆನ್ನಾಗಿಯೇ ಇದೆ. ನೀವು ಹೂ ಅಂದ್ರೆ, ಬ್ಯಾಕ್ ಟೈರನ್ನು ಮುಂದೆ ಹಾಕಿ, ಫ್ರಂಟ್ ಟೈರನ್ನು ಹಿಂದೆ ಹಾಕೋಣ. ಹೊಸ ಟೈಯರ್ ಹಾಕ್ಸಿದರೂ ಪಂಕ್ಚರ್ ಆಗೇ ಆಗುತ್ತೆ".

೧೫೦೦ ರೂಪಾಯಿ ಉಳಿಸಬಹುದಲ್ಲ ಎಂಬ ದೂರಾಲೋಚನೆಯಿಂದ, ಇಷ್ಟು ಸಿಂಪಲ್ ಐಡಿಯಾ ತನಗೇಕೆ ಹೊಳೆಯಲಿಲ್ಲ? ಎಂಬ ಮುಜುಗರದಿಂದ ಟೋನಿ ತನಗೆ ತಾನೇ ಅಂದುಕೊಂಡ - ಮನುಷ್ಯ ಎಷ್ಟು ಓದಿಕೊಂಡಿದ್ದರೇನು - ಕಾಮನ್ ಸೆನ್ಸ್, ಸಾಮಾನ್ಯ ಜ್ಞಾನ ಇರಬೇಕು. " ಸರಿ. ಈವಾಗ ಲೇಟ್ ಆಗಿದೆ ನೆಕ್ಸ್ಟ್ ಟೈಮ್ ಮಾಡಿಸಿಕೊಳ್ತೀನಿ" ಎಂದು ಅಲ್ಲಿಂದ ಹೊರಟಿದ್ದ ಟೋನಿ. 

ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನೋ ಗಾದೆಯಂತೆ, ಸ್ವಲ್ಪ ದಿನದ ನಂತರ, ಬ್ಯಾಕ್ ಟೈಯರ್ ಮತ್ತೊಮ್ಮೆ ಪಂಕ್ಚರ್ ಆಯಿತು. ಈ ಸಾರಿ, ಗಾಳಿ ಸ್ಲೋ ಆಗಿ ಹೋಗ್ತಾ ಇತ್ತು. ಟೋನಿ ರೆಗ್ಯುಲರ್ ಪಂಕ್ಚರ್ ಶಾಪಿನತ್ತ ಹೋದ. ತಲೆ ಇಲ್ಲದ ಸಣ್ಣ ಮೊಳೆ ಬ್ಯಾಕ್ ಟೈರನ್ನು ಸ್ಟ್ಯಾಬ್ ಮಾಡಿತ್ತು. ಪ್ರತೀ ಮೂರು ದಿನಕ್ಕೊಮ್ಮೆ ಏರ್ ಹಾಕಿಸಿದರೆ ಹಾಗೇ ಓಡಿಸಬಹುದಿತ್ತು. ಹಿಂದಿನ ಟೈಯರ್ ಮುಂದೆ ಹಾಕಲು ಹೇಳಿದ ಟೋನಿ. ಜೊತೆಗೆ ಈತ ಈ ಸಲಹೆ ಕೊಡದೇ ಇದ್ದುದರಿಂದ ತುಸು ಕೋಪನೂ ಇತ್ತು. 

"ಯಾವ ಗುಬಾಲ್ ಸಾರ್ ಹೇಳಿದ್ದು? ಆಲ್ ರೆಡಿ ಡ್ಯಾಮೇಜ್ ಆಗಿರೋ ಟೈಯರ್ ಮುಂದೆ ಇದ್ದರೆ ಪಂಕ್ಚರ್ ಆದಾಗ ಏನು ಮಾಡ್ತೀರಿ? ಮುಂದಿನ ಟೈಯರ್ ಪಂಕ್ಚರ್ ಆದರೆ ಗಾಡಿ ಓಡ್ಸೋಕೆ ಆಗೋಲ್ಲ. ಹಿಂದಿನ ಟೈಯರ್ ಪಂಕ್ಚರ್ ಆದರೂ ಗಾಡಿ ಸ್ವಲ್ಪ ದೂರ ಓಡಿಸಬಹುದು!"

ಟೋನಿ, ಸಂದಿಗ್ದದಲ್ಲಿ ಸಿಲುಕಿದ. ಈ ಇಬ್ಬರಲ್ಲಿ ಯಾರು ಸರಿ? 

ಆತನಲ್ಲಿ ಟೈಯರ್ ಸ್ಟಾಕ್ ಇರಲಿಲ್ಲವಾದುದರಿಂದ ಟೋನಿ ೩-೪ ದಿನಕ್ಕೊಮ್ಮೆ ಏರ್ ಹಾಕಿಸಿಕೊಂಡೇ ಗಾಡಿ ಓಡಿಸತೊಡಗಿದ. 

ಈ ನಡುವೆ, ಮಗನಿಗೆ ಒಂದು ಬೈಸಿಕಲ್ ಕೂಡ ಬಂತು. ಅದರ ಟೈಯರ್ ಗಾಳೀನೂ ಪಂಕ್ಚರ್ ಆಗದೆ ಕಾಲಿಯಾಗುತಿತ್ತು. ಇದೂ ಒಂದು ಯಕ್ಷಪ್ರಶ್ನೆ ಆಗೋ ಮೊದಲೇ ಒಂದು ಏರ್ ಪಂಪ್ ಮತ್ತು ಅದರ ಜೊತೆ ಆಫರ್ ಇದ್ದ ಪಂಕ್ಚರ್ ಕಿಟ್ ಖರೀದಿಸಿದ ಟೋನಿ. ನಿನ್ನೆ, ಮತ್ತೆ ಸ್ಕೂಟರ್ ಟೈಯರ್ ಗಾಳಿ ಹೋದಾಗ ತಾನೇ ಟ್ರೈ ಮಾಡಿ ಪಂಕ್ಚರ್ ಕಟ್ಟಿದ ಟೋನಿ. ಏರ್ ಪಂಪ್ ನಿಂದ ಗಾಳೀನೂ ಹಾಕಿದಾಗ, ಏನೋ ಗೆದ್ದ ಖುಷಿ ಟೋನಿಯಲ್ಲಿತ್ತು. 

"ಟೈರಿಗೆ ಪಂಕ್ಚರ್ ಹಾಕೋದೇನು ದೊಡ್ಡ ಸಾಧನೆಯೇ?", ಅಂತ ಕೇಳಿದೆ. 

ಟೋನಿಯ ಉತ್ತರ, ನೇರ ಹಾಗೂ ಸರಳವಾಗಿತ್ತು. "ಚಿಕ್ಕ ಚಿಕ್ಕ ವಿಷಯಗಳೇ ಜೀವನಕ್ಕೆ ಸ್ಫೂರ್ತಿ. ನಾನು ಟೈರಿಗೆ ಪಂಕ್ಚರ್ ಕಟ್ಟುತ್ತೀನಿ ಅಂತ ನೀನು ಯಾವಾಗಲಾದರೂ ಅಂದುಕೊಂಡಿದ್ಯಾ?". 

ನಿಜ. ತಲೆಯಾಡಿಸಿ ಹರ್ಷ ವ್ಯಕ್ತ ಪಡಿಸಿದೆ.

ಟೋನಿಯ ಕಣ್ಣಲ್ಲಿನ ಖುಷಿ, ನನಗೂ ಖುಷಿ ನೀಡಿತು. ಸ್ಪೂರ್ತಿಯ ಸೆಲೆ ಚಿಕ್ಕದಾದರೇನು? ಜೀವನ ಎಂಬ ನದಿ ಹರಿಯಲು ಅದೇ ದೊಡ್ಡ ಪ್ರೇರಣೆ.

No comments: